ಕೆಲ್ಪಿಕ್ ಭಾಷೆಗಳು
ಇಂಡೋಯೂರೋಪಿಯನ್ ಭಾಷಾಪರಿವಾರಕ್ಕೆ ಸೇರಿದ್ದು ಮುಖ್ಯವಾಗಿ ಐರಿಷ್, ಸ್ಕಾಟ್ಸ್ ಗ್ಯಾಲಿಕ್, ವೆಲ್ಷ್, ಬ್ರೆಟನ್ ಭಾಷೆಗಳನ್ನೊಳಗೊಂಡ ಒಂದು ಉಪ-ಭಾಷಾಸಮೂಹಕ್ಕೆ ಈ ಹೆಸರಿದೆ. ಇವನ್ನು ಕೆಂಟುಮ್ ಗುಂಪಿಗೆ ಸೇರಿಸಿದೆಯಾದರೂ ಈ ಶಾಖೆಯ ಗೋಯ್ದೆಲಿಕ್ ಭಾಷೆಯಲ್ಲಿ ಮಾತ್ರ ಕ, ಗ ಸ್ಪರ್ಶವರ್ಣಗಳು ತೋರಿಬರುತ್ತದೆ. ಆದರೆ ಗಾಲಿಷ್ ಮತ್ತು ಬ್ರಿಥಾನಿಕ್ ಭಾಷೆಗಳಲ್ಲಿ ಸ್ಪರ್ಶವರ್ಣಗಳು ತೋರಿಬಂದರೂ ಅವು ಓಷ್ಠ್ಯವರ್ಣಗಳು. ಅಂದರೆ ಗೊಯ್ದೆಲಿಕ್ ಭಾಷೆಯ ಕ ಕಾರ ಸ್ಥಾನದಲ್ಲಿ ಗಾಲಿಷ್ ಭಾಷೆಯಲ್ಲಿ ಪ ಕಾರ ತೋರಿಬರುತ್ತದೆ. ಉದಾ: ಕೊಯಿಕ್ (ಐರಿಷ್)=ಪಿಂಪ್ (ವೆಲ್ಷ್) `S.

ಇಂಡೋಯೂರೋಪಿಯನ್ ಪರಿವಾರದ ಇತರ ಶಾಖೆಗಳಲ್ಲಿ ಕಾಣಬರದ ಕೆಲ್ಟಿಕ್ ಶಾಖೆಯ ಕೆಲವು ವಿಶಿಷ್ಟ ಲಕ್ಷಣಗಳಿವು:
1 ಇಂಡೋಯೂರೋಪಿಯನ್ (ಇಂ.ಯೂ.) ಪರಿವಾರದ ಪದಾದಿಯಲ್ಲಿನ ಮತ್ತು ಎರಡು ಸ್ವರಗಳ ಸ್ವರಗಳ ಮಧ್ಯವರ್ತಿ ಪ್ರಕಾರ ಇಲ್ಲಿ ನಷ್ಟವಾಗಿದೆ. ಉದಾ: ಪತೇರ್ (ಲ್ಯಾಟಿನ್)=ಅಥಿರ್ (ಐರಿಷ್)=ತಂದೆ.
ಈ ಧ್ವನಿಪರಿಣಾಮ ಕೆಲ್ಟಿಕ್ ಶಾಖೆಯ ಭಾಷೆಗಳಿಗೆಲ್ಲ ಸಾಮಾನ್ಯ. ಕ್ರಿ.ಪೂ.1000 ವರ್ಷಕ್ಕೆ ಮುಂಚೆಯೇ ಈ ಪರಿವರ್ತನೆಯಾಗಿರಬೇಕೆಂದು ವಿದ್ವಾಂಸರ ಆಭಿಪ್ರಾಯ.

2 ಇಂ.ಯೂ.ನ ಏಕಾರ ಕೆಲ್ಟಿಕ್ ಭಾಷೆಗಳಲ್ಲಿ ಈಕಾರವಾಗಿ ಪರಿವರ್ತಿತವಾಗಿದೆ. ಉದಾ: ವೇರುಸ್ (ಲ್ಯಾಟಿನ್)=ಫೀರ್ (ಐರಿಷ್)=ನಿಜ.

3 ಇಂ.ಯೂ.ನ ವ್ಯಂಜನಪೂರ್ವದಲ್ಲಿನ ರ ಕಾರದ ಸ್ವರ ರೂಪ ಇಲ್ಲಿ ರಿ ಆಗಿ ಪರಿಣಾಮ ಹೊಂದಿದೆ. (ಗ್ರೀಕ್‍ನಲ್ಲಿ ಅರ್ ಎಂದಾಗಿದೆ). ಉದಾ: ಹೃದ್ (ಸಂಸ್ಕøತ)=ಕ್ರಿದೆ (ಐರಿಷ್), ಕರ್ದಿಯ (ಗೀಕ್)=ಹೃದಯ.

4 ಇಂ.ಯೂ.ನ ಸ್ವರಗಳ ನಡುವಣ ಮಹಾಪ್ರಾಣ ಭ, ಧ, ಘ ಕೆಲ್ಟಿಕ್ ಭಾಷೆಗಳಲ್ಲಿ ಬ, ದ, ಗ ಆಗಿ ಉಳಿದಿವೆ. ಉದಾ: ರುಧಿರ (ಸಂಸ್ಕøತ)=ರುಅದ್ (ಐರಿಷ್)=ರಕ್ತ.
ಕೆಲ್ಟಿಕ್ ಮತ್ತು ಇಟಾಲಿಕ್ ಶಾಖೆಗಳ ನಡುವೆ ಕಾಣಬರುವ ಹೆಚ್ಚಿನ ಸಾಮ್ಯಗಳನ್ನಾಧರಿಸಿಕೊಂಡು ಇಟಾಲೋ-ಕೆಲ್ಟಿಕ್ ಎಂಬ ಜೋಡಿ ಶಾಖೆಯೊಂದನ್ನು ಕೆಲವರು ರೂಪಿಸಿಕೊಂಡಿದ್ದಾರೆ. ಹೀಗೆ ಅವೆರಡು ಶಾಖೆಗಳಿಗೂ ಸಮಾನವಾದ ಲಕ್ಷಣಗಳಲ್ಲಿ ಕೆಲವು ಹೀಗಿವೆ:

1 ಕ್ರಿಯೆಯ ಕರ್ಮಣಿ ರೂಪದಲ್ಲಿರುವ ರ ಪ್ರತ್ಯಯ (ಈ ಲಕ್ಷಣ ಹಿಟ್ಟೈಟ್ ಮತು ತೊಖಾರಿಯನ್ ಶಾಖೆಗಳಲ್ಲೂ ಕಂಡುಬರುತ್ತದೆ).

2 ಕ್ರಿಯೆಯ ಭವಿಷ್ಯತ್ಕಾಲರೂಪದಲ್ಲಿ ಬ ಪ್ರತ್ಯಯ.

3 ಭಾವನಾಮಗಳಲ್ಲಿನ ತಿಯೋ-ಎಂಬ ಪ್ರತ್ಯಯ.

4 ಪುಲ್ಲಿಂಗ ಮತ್ತು ನಪುಂಸಕಲಿಂಗ ಓ ಕಾರಾಂತಶಬ್ದಗಳ ಷಷ್ಠೀ ಏಕವಚನದಲ್ಲಿ ಈ ಎಂಬ ಪ್ರತ್ಯಯ.
ಕೆಲ್ಟಿಕ್ ಭಾಷೆಗಳನ್ನಾಡುವ ಜನ ಮೊದಲಿಗೆ ಮಧ್ಯ ಮತ್ತು ಪಶ್ಚಿಮ ಯೂರೋಪಿನಲ್ಲಿ ವಾಸವಾಗಿದ್ದರು. ಈ ಶಾಖೆಯಲ್ಲಿ ಗಾಲಿಷ್, ಗೊಯ್ದೆಲಿಕ್, ಬ್ರಿಥಾನಿಕ್ ಮತ್ತು ಪಿಕ್ಟಿಷ್ ಎಂಬ ನಾಲ್ಕು ಉಪಶಾಖೆಗಳನ್ನು ಗುರುತಿಸಬಹುದು. ಗೊಯ್ದೆಲಿಕ್‍ನಲ್ಲಿ ಐರಿಷ್, ಸ್ಕಾಟಿಷ್ ಗ್ಯಾಲಿಕ್ ಮತ್ತು ಮ್ಯಾಂಕ್ಸ್ ಎಂಬ ಮೂರು ಭಾಷೆಗಳು ಸೇರಿವೆ. ಬ್ರಿಥಾನಿಕ್‍ನಲ್ಲಿ ವೆಲ್ಷ್, ಕಾರ್ನಿಷ್ ಮತ್ತು ಬ್ರೆಟನ್ ಎಂಬ ಮೂರು ಭಾಷೆಗಳಿವೆ.

ಕೆಲ್ಟಿಕ್ ಭಾಷೆಗಳ ಒಂದು ವಿಶೇಷ ಲಕ್ಷಣವೆಂದರೆ, ವಾಕ್ಯಾಂಶಗಳಲ್ಲಿ (ಕ್ಲಾಸಸ್) ಅಂತರ್ಗತವಾಗಿದ್ದಾಗ ಪದಾದಿಯಲ್ಲಿನ ವರ್ಣಗಳು ಹಲವು ರೀತಿಯ ವಿಕಾರಕ್ಕೊಳಗಾಗುತ್ತವೆ. ಚಾರಿತ್ರಿಕವಾಗಿ ಪೂವಾಪದಾಂತ್ಯ ವರ್ಣಗಳು ಈ ವಿಕೃತಿ ಕಾರ್ಯಕ್ಕೆ ಕಾರಣವಾದವೆನ್ನಬಹುದು. ಆದರೆ, ಈ ಪೂರ್ವಪದಾಂತ್ಯ ವರ್ಣಗಳು ಲೋಪ ಹೊಂದಿದ ಮೇಲೂ ಅವುಗಳಿಂದಾದ ವಿಕೃತಿಗಳು ಹಾಗೆಯೇ ಉಳಿದು ಬಂದುವು.

ಗಾಲಿಷ್ ಭಾಷೆ ಫ್ರಾನ್ಸ್ ದೇಶದ ಗಾಲ್ ಎಂಬಲ್ಲಿಯ ಮತ್ತು ಉತ್ತರ ಇಟಲಿಯ ಭಾಷೆಯಾಗಿತ್ತು. ಈ ಭಾಷೆಯಲ್ಲಿ ಹೆಚ್ಚಿನ ಸಾಹಿತ್ಯ ರಚನೆಯೇನೂ ನಡೆದಿಲ್ಲ. ಕ್ರಿ.ಪೂ. 2ನೆಯ ಶತಮಾನದಲ್ಲಿನ ಉತ್ತರ ಎಟ್ರಸ್ಕನ್ ಬರೆವಣಿಗೆಯಲ್ಲಿ ಕೆಲವು ಶಿಲಾಶಾಸನಗಳು, ರೋಮ್ ಸಾಮ್ರಾಜ್ಯಕಾಲದಲ್ಲಿ ಉಪಯೋಗದಲ್ಲಿದ್ದ ಲ್ಯಾಟಿನ್ ಬರೆವಣಿಗೆಯಲ್ಲಿ ಕೆಲವು ಶಾಸನಗಳು ಗ್ರೀಕ್ ಮತ್ತು ರೋಮನ್ ಅಭಿಜಾತ ಸಾಹಿತ್ಯ ಗ್ರಂಥಗಳಲ್ಲಿ ಮತ್ತು ನಾಣ್ಯಗಳ ಮೇಲೆ ಉದಾಹರಿಸಲ್ಪಟ್ಟಿರುವ ಜನರ ಮತ್ತು ಸ್ಥಳಗಳ ಹೆಸರುಗಳ-ಇವಿಷ್ಟು ಮಾತ್ರ ಈ ಭಾಷೆ ಒಂದು ಕಾಲದಲ್ಲಿದ್ದಿತೆಂದು ರುಜುವಾತು ಮಾಡಲು ಉಳಿದಿವೆ.
ಗಾಲಿಷ್ ಭಾಷೆಯಲ್ಲಿ ದೊರೆತಿರುವ ಶಿಲಾ ಶಾಸನಗಳು ಕೇವಲ 50. ಅವುಗಳಲ್ಲಿ ಹೆಚ್ಚಿನವು ಚಿಕ್ಕ ಶಾಸನಗಳು. ಉತ್ತರ ಇಟಲಿಯಲ್ಲಿ ದೊರೆತ ಕೆಲವನ್ನು ಬಿಟ್ಟರೆ ಉಳಿದ ಶಾಸನಗಳು ಫ್ರಾನ್ಸಿನಲ್ಲಿ ಕಂಡಬಂದಿವೆ. ಆ ಕಾರಣದಿಂದಾಗಿ ಗಾಲಿಷ್ ಭಾಷೆಯನ್ನು ಐರೋಪ್ಯ ಕೆಲ್ಟಿಕ್ ಎಂದೂ ಕರೆಯುತ್ತಾರೆ.

ಕೆಲ್ಟಿಕ್ ಭಾಷೆಗಳಲ್ಲಿ ಐರಿಷ್ ಅಥವಾ ಎರ್ಸ್ ಭಾಷೆಯೇ ಅತಿ ಪ್ರಧಾನವಾದದ್ದು. ಸುಮಾರು 750ರಿಂದ 1100ರ ವರೆಗಿನ ಕಾಲವನ್ನು ಐರಿಷ್ ಭಾಷೆಯ ಪ್ರಥಮ ಯುಗವೆಂದೂ 1100 ರಿಂದ 1500ರ ವರೆಗಿನ ಕಾಲವನ್ನು ಮಧ್ಯಾಂತರ ಕಾಲವನ್ನು ಮಧ್ಯಯುಗವೆಂದೂ ಪರಿಗಣಿಸಿದ್ದಾರೆ. ಈ ಭಾಷೆಯ ಆಧುನಿಕ ರೂಪವೇ ಐರ್ಲೆಂಡಿನ ಅಧಿಕೃತ ಭಾಷೆಯಾಗಿದೆ. ಏಳನೆಯ ಶತಮಾನದ ಕೊನೆಯ ಭಾಗಕ್ಕಿಂತ ಮುಂಚಿನ ಕಾಲದ ಹಸ್ತ ಪ್ರತಿಗಳಾವುವೂ ದೊರಕಿಲ್ಲ. ಈ ಭಾಷೆಗಾಗಿಯೇ ಉಪಯೋಗಿಸಲ್ಪಟ್ಟ ಓಗಂ ಬರೆವಣಿಗೆಯಲ್ಲಿ 4ರಿಂದ 6ನೆಯ ಶತಮಾನದ ಮಧ್ಯಕಾಲಕ್ಕೆ ಸೇರಿದ ಸುಮಾರು 300 ಶಿಲಾಶಾಸನಗಳು ಐರ್ಲೆಂಡಿನ ದಕ್ಷಿಣಭಾಗದಲ್ಲಿ ಉಪಲಬ್ಧವಾಗಿವೆ. ಈ ಶಾಸನಗಳಲ್ಲಿನ ಭಾಷೆಯನ್ನು ಐರಿಷ್‍ನ ಅತಿ ಪ್ರಾಚೀನ ರೂಪವೆನ್ನಬಹುದು. ಅನಂತರದ ಐರಿಷ್ ಭಾಷೆಯಲ್ಲಿ ತೋರಿಬರುವ ಪದಾಂತ್ಯವರ್ಣಗಳ ಲೋಪವಾಗಲೀ ಪದಮಧ್ಯ ಸ್ವರಗಳ ಲೋಪವಾಗಲೀ ಈ ಭಾಷೆಯಲ್ಲಿ ಕಂಡುಬರುವುದಿಲ್ಲ. ಹಾಗೂ ಶಾಸನಗಳಲ್ಲಿ ಒಂದೇ ಒಂದು ಕ್ರಿಯಾಪದದ ರೂಪವೂ ದೊರೆಯುವುದಿಲ್ಲ.

ಸಂಸ್ಕøತದಲ್ಲಿರುವಂತೆಯೇ ಹಳೆಯ ಐರಿಷ್‍ನಲ್ಲೂ ನಾಮಪದಗಳಲ್ಲಿ ಸ್ವರಾಂತ ಮತ್ತು ವ್ಯಂಜನಾಂತಗಳೆಂಬ ಭೇದವಿದೆ. ಮೂರು ಲಿಂಗಗಳೂ ಮೂರು ವಚನಗಳೂ ಕಾಣಬರುತ್ತವೆ. ಮಧ್ಯ ಐರಿಷ್‍ನ ವೇಳೆಗೆ ನಪುಂಸಕ ಲಿಂಗ ಇಲ್ಲವಾಗುತ್ತದೆ. ದ್ವಿವಚನಮಾತ್ರ ಐರಿಷ್‍ನಲ್ಲಿ ಇಂದಿನವರೆಗೂ ಉಳಿದುಬಂದಿದೆ. ಪ್ರಥಮ, ಸಂಬೋಧನ, ದ್ವಿತೀಯಾ, ಚತುರ್ಥೀ ಮತ್ತು ಷಷ್ಠೀ ಎಂದು ಕೇವಲ 5 ವಿಭಕ್ತಿಗಳಿವೆ. ಪದಾಂತ್ಯ ವರ್ಣಗಳ ಲೋಪದಿಂದಾಗಿ ಏಕವಚನದ ದ್ವಿತೀಯ ಮತ್ತು ಚತುರ್ಥೀ ರೂಪಗಳಲ್ಲಿ ವ್ಯತ್ಯಾಸ ಉಳಿಯಲಿಲ್ಲ. ಆಧುನಿಕ ಐರಿಷ್‍ನಲ್ಲಿ ನಾಲ್ಕು ವಿಭಕ್ತಿಗಳು ಮಾತ್ರ ಇವೆ.
ಐರಿಷ್‍ನಲ್ಲಿ ಹೆಚ್ಚು ಪಾಲು ಕ್ರಿಯಾಪದಗಳು ಸಂಯುಕ್ತ ಕ್ರಿಯಾರೂಪಗಳು. ಕ್ರಿಯಾಪದಗಳೊಡನೆ ಒಂದರಿಂದ ನಾಲ್ಕು ಉಪಸರ್ಗಗಳು ಸೇರಿರಬಹುದು. ಮೂರು ಉಪಸರ್ಗಗಳಿಂದ ಕೂಡಿರುವ ಕ್ರಿಯಾರೂಪಗಳಂತೂ ಸಾಮಾನ್ಯವಾಗಿ ಕಂಡುಬರುತ್ತವೆ. ಸಂಸ್ಕøತದಲ್ಲಿರುವಂತೆ ಇಲ್ಲೂ ಕ್ರಿಯಾರೂಪಗಳು ಕರ್ತೃವನ್ನೂ ಸೂಚಿಸುತ್ತವೆ. ಉದಾ: ಬೆರಿದ್=ಅವನು ಬಯ್ಯುತ್ತಾನೆ.
ಪದಾದಿಯಲ್ಲಿನ ವರ್ಣಗಳಿಗೆ ಮೂರು ಬಗೆಯ ವಿಕಾರ ಐರಿಷ್‍ನಲ್ಲಿ ಕಂಡುಬರುತ್ತದೆ. ಈ ಮಾರ್ಪಾಡು ಮೊದಲಿಗೆ ಪೂರ್ವಪದದ ಅಂತ್ಯವರ್ಣಗಳಿಂದಾಯಿತೆನ್ನಬಹುದು.

		1 ಸ್ಪರ್ಶವರ್ಣಗಳು ಊಷ್ಮ ವರ್ಣಗಳಾಗಿ ಮಾರ್ಪಡುತ್ತವೆ. ಉದಾ: ಗುತ್=ಕಂಠ; ಮೋ ಗುತ್=ನನ್ನ ಕಂಠ (ಮಾತು, ಧ್ವನಿ).

	2. ಅಲ್ಪಪ್ರಾಣಗಳು ಮಹಾಪ್ರಾಣಗಳಾಗಿಯೂ ಮಹಾಪ್ರಾಣಗಳು ಅದೇ ವರ್ಗದ ಅನುನಾಸಿಕವಾಗಿಯೂ ಮಾರ್ಪಡುತ್ತವೆ. ಉದಾ: ಬೋ=ಹಸು; ನ ಸೆಮ್ಬೋ=ಆರು ಹಸುಗಳಲ್ಲಿ.

	3. ಪದಾದಿಯ ಲಕಾರ ಅನುನಾಸಿಕ ಮತ್ತು ಸಕಾರಗಳು ದ್ವತ್ವರೂಪವನ್ನು ತಾಳುತ್ತವೆ. ಉದಾ: ಇನ್ನಮ್ಮೆ-ರ್ಬಿ=ಲೋಪದೋಷಗಳು; ನ-ನ್ನಿ=ಯಾವುದಾದರೂ.

ಸ್ಕಾಟಿಷ್ ಗ್ಯಾಲಿಕ್ ಎಂಬುದು 6ನೆಯ ಶತಮಾನದಲ್ಲಿ ವಲಸೆಬಂದ ಐರಿಷ್ ಜನ ಸ್ಕಾಟ್ಲೆಂಡಿಗೆ ತಂದು ಬೆಳೆಸಿದ ಕೆಲ್ಟಿಕ್ ಭಾಷೆ. ಐಲ್ 

ಆಫ್ ಮ್ಯಾನ್‍ನಲ್ಲಿ ಬಳಕೆಯಲ್ಲಿದ್ದ ಭಾಷೆ ಮ್ಯಾಂಕ್ಸ್. ಈ ಎರಡು ಭಾಷೆಗಳೂ ಈಗ ಪೂರ್ಣವಾಗಿ ನಶಿಸಿ ಹೋಗಿದೆ. ಮ್ಯಾಂಕ್ಸ್ ಭಾಷೆಯ ಪ್ರಾಚೀನ ರೂಪವನ್ನು ಫಿಲಿಪ್ಸ್ ಪಾದ್ರಿಯ ಬುಕ್ ಆಫ್ ಕಾಮನ್ ಪ್ರೇಯರ್ಸ್ (1610) ಕೃತಿಯಲ್ಲಿ ಕಾಣಬಹುದು.
ಮ್ಯಾಂಕ್ಸ್ ಭಾಷೆಯಲ್ಲಿ ಕೂಡ ಹೆಚ್ಚಿನ ಸಾಹಿತ್ಯ ಸೃಷ್ಟಿಯಾಗಲಿಲ್ಲ. ಉಳಿದು ಬಂದಿರುವುದರಲ್ಲಿ ಕೆಲವು ಮೂಲಕೃತಿಗಳಿವೆ. ಇನ್ನು ಕೆಲವು ಅನುವಾದಗಳು. ಮೂಲಕೃತಿಗಳಲ್ಲಿ ಪದ್ಯರೂಪದ ಕತೆಗಳು ಅಂದರೆ ಪ್ರಗಾಥಗಳು (ಬ್ಯಾಲಡ್ಸ್) ಮತ್ತು ಒಂದು ರೀತಿಯ ಹಾಡುಗಳೇ (ಕೆರೋಲ್ಸ್) ಹೆಚ್ಚು. ಈ ಹಾಡುಗಳನ್ನು ಕ್ರಿಸ್‍ಮಸ್ ಹಬ್ಬದ ಹಿಂದಿನ ರಾತ್ರಿ ಚರ್ಚುಗಳಲ್ಲಿ ಹಾಡುತ್ತಿದ್ದರು. ಹಾಡಬೇಕೆಂದೆನಿಸಿದವರು ಎದ್ದುನಿಂತು ಹಾಡಬಹುದಿತ್ತು. ಪ್ರಪಂಚದ ಪ್ರಳಯ. ನರಕದ ಯಾತನೆಗಳು, ಪಾಪಪುಣ್ಯಗಳ ವಿಚಾರಣೆ ದಿನ-ಇತ್ಯಾದಿ ವಿಷಯಗಳೇ ಈ ಹಾಡುಗಳಲ್ಲಿ ತುಂಬಿರುತ್ತಿತ್ತು. ಅನುವಾದ ಸಾಹಿತ್ಯದಲ್ಲಿ ಹೆಚ್ಚುಪಾಲು ಮತೀಯ ವಿಷಯಗಳೇ ಇರುತ್ತಿದ್ದುವು. ಇವುಗಳಲ್ಲೆಲ್ಲ ಮುಖ್ಯವಾದದ್ದು 775ರಲ್ಲಿ ಪ್ರಕಾಶಗೊಂಡ ಬೈಬಲ್ ಅನುವಾದ. ಮ್ಯಾಂಕ್ಸ್ ಭಾಷೆಯಲ್ಲಿ ಈಸೋಪನ ಕತೆಗಳ ಅನುವಾದ ಕೂಡ ನಡೆದಿದೆ.

ಐರಿಷ್ ಅನಂತರ ಕೆಲ್ಟಿಕ್ ಭಾಷೆಗಳಲ್ಲಿ ವೆಲ್ಷ್‍ಗೇ ಹೆಚ್ಚು ಪ್ರಾಧಾನ್ಯವೆನ್ನಬಹುದು. 12ನೆಯ ಶತಮಾನಕ್ಕೆ ಮುಂಚಿನ ರೂಪವನ್ನು ಹಳೆಯ ವೆಲ್ಷ್ ಎಂದೂ ಅನಂತರ 16ನೆಯ ಶತಮಾನದ ವರೆಗೆ ಮಧ್ಯ ವೆಲ್ಷ್ ಎಂದೂ ಪರಿಗಣಿಸುವುದು ರೂಢಿಯಲ್ಲಿದೆ. ವೆಲ್ಷ್‍ನ ಮುಖ್ಯ ಲಕ್ಷಣಗಳಲ್ಲಿ ಕೆಲವನ್ನು ಇಲ್ಲಿ ಉದಾಹರಿಸಬಹುದು. 

1 ಮೂಲ ಕೆಲ್ಟಿಕ್‍ನ ಏ ಕಾರ ವೆಲ್ಷ್‍ನಲ್ಲಿ ಅವ್ ಆತಿ ಪರಿವರ್ತಿತವಾಗಿದೆ.

2 ಮೂಲ ಕೆಲ್ಟಿಕ್‍ನ ಔ ಕಾರ ವೆಲ್ಷ್‍ನಲ್ಲಿ ವಿ ಎಂದಾಗಿದೆ.

3 ಮೂಲ ಕೆಲ್ಟಿಕ್‍ನ ಊ ಕಾರ ಇ ಕಾರವಾಗುತ್ತದೆ. ಅಂತ್ಯ ಓ ಕಾರ ಮೊದಲಿಗೆ ಊ ಕಾರವಾಗಿ ಮಾರ್ಪಟ್ಟು ಅನಂತರ ಈ ಕಾರವಾಗುತ್ತದೆ.

ಅಂತ್ಯಸ್ವರಗಳೆಲ್ಲ ವೆಲ್ಷ್‍ನಲ್ಲಿ ಲೋಪ ಹೊಂದಿದುವು. ಹೀಗೆ ಲೋಪ ಹೊಂದಿದ್ದರಿಂದ ಇವುಗಳ ಪೂರ್ವಸ್ವರಗಳಲ್ಲಿ ಕೂಡ ಬದಲಾವಣೆಗಳು ತೋರಿ ಬಂದುವು.

ಐರಿಷ್‍ನಲ್ಲಿ ಕಂಡುಬರುವಂತೆ ವೆಲ್ಷ್‍ನಲ್ಲಿ ಕೂಡ ಪದಾದಿಯ ವರ್ಣಗಳಲ್ಲಿ ಮಾರ್ಪಾಟು ಕಂಡುಬರುತ್ತದೆ. ಉದಾ: ಪೆನ್=ತಲೆ; ಫಿ ಮ್ಹೆನ್=ನನ್ನ ತಲೆ; ಐ ಬೆನ್=ಅವನ ತಲೆ; ಐ ಫೆನ್=ಅವಳ ತಲೆ.

ಈಗ ನಷ್ಟವಾಗಿ ಹೋಗಿರುವ ಇನ್ನೊಂದು ಕೆಲ್ಟಿಕ್ ಭಾಷೆಯೆಂದರೆ ಕಾರ್ನಿಷ್. ಇದು 17ನೆಯ ಶತಮಾನದ ವರೆಗೂ ಕಾರ್ನವಾಲಿನ ಭಾಷೆಯಾಗಿತ್ತು. ಪದಾದಿಯಲ್ಲಿದ್ದ ತ, ದ ಗಳು ಸ, ಜ ಗಳಾಗಿ ಮಾರ್ಪಟ್ಟಿರುವುದು ಈ ಭಾಷೆಯ ಮುಖ್ಯ ಲಕ್ಷಣ. ಕಾರ್ನಿಷ್ ಭಾಷೆಯಲ್ಲಿ ಅತಿ ಹಳೆಯದಾಗಿ ದೊರಕಿರುವುದು ಕೆಲವು ಹೆಸರುಗಳು ಮಾತ್ರ: ಅನ್ಯ ಭಾಷೆಯಲ್ಲಿರುವ ಗ್ರಂಥಗಳಲ್ಲಿ ವ್ಯಾಖ್ಯೆಯ ರೂಪದಲ್ಲಿ ಕೊಟ್ಟಿರುವ ಕಾರ್ನಿಷ್‍ನ ಪದಗಳು, 12ನೆಯ ಶತಮಾನದಲ್ಲಿ ತಯಾರಿಸಿದ ಕಾರ್ನಿಷ್ ಪದಗಳ ಪಟ್ಟಿಯೊಂದು, ಡೂಮ್ಸ್‍ಡೇ ಪುಸ್ತಕದಲ್ಲಿನ ಮನುಷ್ಯರ ಕೆಲವು ಹೆಸರುಗಳು. ಬೋಡ್‍ಲೀಯನ್ ಗ್ರಂಥಾಲಯದಲ್ಲಿರುವ ಗ್ರಂಥವೊಂದರಲ್ಲಿ ವ್ಯಾಖ್ಯೆಯನ್ನು ಕಾರ್ನಿಷ್ ಭಾಷೆಯಲ್ಲಿ ಬರೆದಿಟ್ಟಿದೆ. ಈಗ ಬ್ರಿಟಿಷ್ ಮ್ಯೂಸಿಯಂನಲ್ಲಿರುವ 12ನೆಯ ಶತಮಾನದ ಹಸ್ತಲಿಖಿತ ಪುಸ್ತಕಮೊಂದರಲ್ಲಿ ಕಾರ್ನಿಷ್ ಭಾಷೆಯದೆನಿಸಿಕೊಂಡ ಶಬ್ದಗಳ ಪಟ್ಟಿಯೊಂದಿದೆ. ಈ ಗ್ರಂಥ ಆಬಟ್ ಆಲ್‍ಫ್ರಿಕ್‍ನ ಪ್ರಸಿದ್ಧ ಲ್ಯಾಟಿನ್-ಇಂಗ್ಲಿಷ್ ಶಬ್ದಕೋಶದ ಅನುವಾದವೆಂದು ತಿಳಿದುಬಂದಿದೆ. ಕಾರ್ನಿಷ್ ಭಾಷೆಯ ಪ್ರಥಮ ಸ್ವತಂತ್ರ ಕೃತಿಯೆಂದರೆ ಮದುವೆ ವಿಷಯವನ್ನು ಕುರಿತು ಬರೆದ ಕೇವಲ 41 ಪದ್ಯ ಸಾಲುಗಳು. ಇದು ಯಾವುದೋ ನಾಟಕವೊಂದರ ಭಾಗವಾಗಿದ್ದಿರಬೇಕೆಂದೂ ಸುಮಾರು 1400ರಲ್ಲಿದ್ದ ರಚಿತವಾಗಿರಬೇಕೆಂದೂ ಅಭಿಪ್ರಾಯವಿದೆ. ಕಾರ್ನಿಷ್ ಭಾಷೆಯಲ್ಲಿ ರಚಿತವಾಗಿರುವುದರಲ್ಲಿ ಹಚ್ಚು ಭಾಗ ನಾಟಕಗಳೇ. ಅವುಗಳಲ್ಲೆಲ್ಲ ಮುಖ್ಯವಾದದ್ದು ಆರ್ಡಿನೇಲಿಯ ಎಂಬ ಮೂರು ಭಾಗಗಳ ನಾಟಕ. ಈ ನಾಟಕದ ಹಳೆಯ ಪ್ರತಿ 15ನೆಯ ಶತಮಾನದಲ್ಲಿ ತಯಾರಿಸಲ್ಪಟ್ಟದ್ದು. ಹಾಡುಗಳು, ಕವನಗಳು, ಗಾದೆಗಳು, ಲೇಖನಗಳು ಇತ್ಯಾದಿಗಳಿರುವ ಕೆಲವು ಅಪೂರ್ಣಗ್ರಂಥಗಳು ಇಲ್ಲವೆ ಗ್ರಂಥ ಭಾಗಗಳು ದೊರಕಿವೆ.

ಬ್ರಿಟನ್ನಿನಲ್ಲಿ ಬಳಕೆಯಲ್ಲಿದ್ದ ಕೆಲ್ಟಿಕ್ ಭಾಷೆಯನ್ನು ಬ್ರೆಟನ್ ಎನ್ನುತ್ತಾರೆ. ಹಳೆಯ ಬ್ರೆಟನ್ ಅನ್ನುವುದಕ್ಕೆ ನಮಗೆ ದೊರಕಿರುವುದು 9 ಮತ್ತು 10ನೆಯ ಶತಮಾನಗಳಲ್ಲಿ ಅನ್ಯಭಾಷೆಯ ಪದಗಳಿಗೆ ಬ್ರೆಟನ್ನಿನಲ್ಲಿ ಕೊಟ್ಟಿರುವ ಅರ್ಥಗಳ ಪಟ್ಟಿ ಮಾತ್ರ. ಮಧ್ಯ ಕಾಲದಲ್ಲಿ ಕೂಡ ಇದರಲ್ಲಿ ಹೆಸರಿಸುವಂಥ ಸಾಹಿತ್ಯವೇನೂ ಇಲ್ಲ. ಅಷ್ಟೇನೂ ಉತ್ತಮಮಟ್ಟಕ್ಕೆ ಸೇರದ ಮತಸಂಬಂಧವಾದ ಪದ್ಯರೂಪಕೃತಿಗಳು ಕೆಲವು ದೊರಕಿವೆ. 17ನೆಯ ಶತಮಾನದಿಂದ ಬ್ರೆಟನ್ ಭಾಷೆಯ ಆಧುನಿಕ ರೂಪ ಕಾಣಸಿಗುತ್ತದೆ. ಮೊದಲಿನಿಂದಲೂ ಬ್ರೆಟನ್ನಿನಲ್ಲಿ ಫ್ರೆಂಚ್ ಭಾಷೆಯಿಂದ ಎರವಲು ಪಡೆದ ಹಲವಾರು ಶಬ್ದಗಳಿವೆ.

ಕಾರ್ನಿಷ್ ಮತ್ತು ಬ್ರೆಟನ್ ಎರಡು ಭಾಷೆಗಳಲ್ಲೂ ಪದಾದಿಯ ವರ್ಣಗಳಿಗೆ ಐರಿಷ್ ಮತ್ತು ವೆಲ್ಷ್‍ನಲ್ಲಿ ಕಂಡುಬರುವ ಅನುನಾಸಿಕ ವಿಕಾರವಿಲ್ಲ. ವಿಭಕ್ತಿ ಪ್ರತ್ಯಯಗಳಲ್ಲಿ ಹೆಚ್ಚುಭಾಗ ನಷ್ಟವಾಗಿ ಹೋಗಿದೆ. ವೆಲ್ಷ್‍ನಂತೆ ಇಲ್ಲೂ ಷಷ್ಠೀ ಸಂಬಂಧ ಸೂಚಿಸಲು ಪ್ರತ್ಯೇಕವಾಗಿ ಪ್ರತ್ಯಯಗಳೇನಿಲ್ಲ. ಷಷ್ಠೀ ರೂಪದಲ್ಲಿರಬೇಕಾದ ಪದ ಎರಡನೆಯ ಪದವಾಗಿ ಬಳಕೆಯಾಗುತ್ತದೆ. ಕನ್ನಡದಲ್ಲಿ ರಾಮನ ತಂದೆ ಎಂದು ಹೇಳುವುದನ್ನು ಕಾರ್ನಿಷ್ ಮತ್ತು ಬ್ರೆಟನ್ನಿನಲ್ಲಿ ತಂದೆ ರಾಮ ಎಂದು ಹೇಳಿದರಾಯಿತು.

ಬ್ರಿಟನ್ನಿನ ಉತ್ತರದಲ್ಲಿದ್ದ ಪಿಕ್ಟಿ ಎಂಬಲ್ಲಿಯ ಭಾಷೆಯಾದ ಪಿಕ್ಟಿಷ್ ಭಾಷೆಯ ಬಗ್ಗೆ ಹೆಚ್ಚಿನದೇನೂ ಉಳಿದುಬಂದಿಲ್ಲ. ಈ ಭಾಷೆಯವೆನ್ನಬಹುದಾದ ಕೆಲವು ಅಂಕಿತ ನಾಮಗಳು ಮಾತ್ರ ಉಳಿದಿವೆ.       

 (ಎಚ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ